ಟೇಬಲ್ ಟೆನಿಸ್
ಒಂದು ಒಳಾಂಗಣ ಆಟ. ಇದನ್ನು ಮೊದಲಿಗೆ ಪಿಂಗ್‍ಪಾಂಗ್ ಎಸಂದು ಕರೆಯಲಾಗುತ್ತಿತ್ತು. ಪಿಂಗ್‍ಪಾಂಗ್ ಎಂಬುದು ಇಂಥ ಆಟಕ್ಕಿರುವ ವಾಣಿಜ್ಯನಾಮ ಮಾತ್ರ. ಪಿಂಗ್‍ಪಾಂಗ್ ಎಂಬುದಕ್ಕೆ ಚೀನೀ ಮೂಲವಿರಬೇಕೆಂಬುದು ಕೆಲವರ ಮತ. ಈ ಆಟದಲ್ಲಿ ಬಳಸುವ ಸಾಧನಗಳೆಂದರೆ ಚೆಂಡು, ಬ್ಯಾಟು, ಬಲೆ ಮತ್ತು ಮೇಜು.

ಮೊದಮೊದಲಿಗೆ ಈ ಆಟವನ್ನು ಊಟದ ಮೇಜುಗಳ ಮೇಲೆ ಆಡಲಾಗುತ್ತಿತ್ತು. ಚೆಂಡಿನ ಜೊತೆಗೆ ಮರದಿಂದ ಮಾಡಿದ ಬ್ಯಾಟುಗಳನ್ನು ಬಳಸುತ್ತಿದ್ದರು. ಅನಂತರ 1880 ಮತ್ತು 1926ರ ನಡುವೆ ಈ ಆಟ ಪ್ರಪಂಚದ ನಾನಾ ಭಾಗಗಳಲ್ಲಿ ಪ್ರಚಲಿತವಾಯಿತು. 1926ರಲ್ಲಿ ಇಂಗ್ಲೆಂಡಿನಲ್ಲಿ ಐವರ್ ಮಾಂಟೆಗೋ ಎಂಬುವರು ಈ ಆಟಕ್ಕೆಂದೇ ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಆಟಕ್ಕಿದ್ದ ಪಿಂಗ್‍ಪಾಂಗ್ ಎಂಬ ಹೆಸರನ್ನು ಟೇಬಲ್ ಟೆನಿಸ್ ಎಂದು ಬದಲಾಯಿಸಿದ್ದು 1922ರಲ್ಲಿ. ಮೊದಲಿಗೆ ಸುಮಾರು 29 ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯತ್ವವನ್ನು ಪಡೆದುಕೊಂಡವು. ಈಗ ಇದರ ಸದಸ್ಯರ ಸಂಖ್ಯೆ 90ನ್ನು ಮೀರಿದೆ. 1950ರ ವರ್ಷಗಳಲ್ಲಿ ಚೀನ ಮತ್ತು ಜಪಾನು ಈ ಆಟದ ಮೇಲೆ ಪ್ರಭುತ್ವವನ್ನು ಪಡೆದಿದ್ದುವು. ಅಮೆರಿಕ ಸಂಯುಕ್ತ ಸಂಸ್ಥಾನದ ಟೇಬಲ್ ಟೆನಿಸ್ ಅಸೋಸಿಯೇಷನ್ನು 1930ರಲ್ಲಿ ಅಂತರರಾಷ್ಟ್ರೀಯ ಫೆಡರೇಷನ್ನಿನೊಡನೆ ಸೇರ್ಪಡೆಗೊಂಡಿತ್ತು. ಆಟದ ನಿಯಮಗಳನ್ನೂ ಆಡುವ ಕ್ರಮಗಳನ್ನೂ ಕಾಲಕ್ರಮೇಣ ಪರಿಷ್ಕರಿಸಲಾಯಿತು. ಸದ್ಯಕ್ಕೆ ಈ ಆಟ ಪ್ರಪಂಚಾದ್ಯಂತ ಪ್ರಚಲಿತವಾಗಿದೆಯಲ್ಲದೆ ಇದು ಎರಡೆನೆಯ ಅತಿವೇಗದ ಹಾಗೂ ಜನಪ್ರಿಯ ಒಳಾಂಗಣ ಕ್ರೀಡೆಯಾಗಿ ಪರಿಣಮಿಸಿದೆ.

ಟೇಬಲ್ ಟೆನಿಸನ್ನು ಆಡಲು ವಿಶಾಲವಾದ 50 ಘಿ 20 ಅಳತೆಯ ಒಂದು ಕೊಠಡಿ ಅಗತ್ಯ. ಈ ಕೊಠಡಿಯೊಳಗೆ 9 ಉದ್ದ, 5 ಅಗಲ ಹಾಗೂ 21/2 ಎತ್ತರವಿರುವಂಥ ಒಂದು ಮೇಜು ಇರುತ್ತದೆ. ಈ ಮೇಜಿನ ಮೇಲ್ಮೈ ಪ್ರಕಾಶವನ್ನು ಪ್ರತಿಫಲಿಸದಂತಿರುತ್ತದೆಯಲ್ಲದೆ ನಯವಾಗೂ ಇರುತ್ತದೆ. ಮೇಜಿನ ಮಧ್ಯದಲ್ಲಿ 6 ಉದ್ದ ಮತ್ತು 6” ಎತ್ತರದ ಬಲೆಯನ್ನು (ನೆಟ್) ಕಟ್ಟಿರುತ್ತಾರೆ. ಒಂದು ಜೊತೆ ಬ್ಯಾಟು ಮತ್ತು ಹೊಳಪಿಲ್ಲದ ಟೊಳ್ಳಾದ ಬಿಳಿಯ ಸೆಲ್ಲೂಲಾಯ್ಡ್ ಚೆಂಡು-ಇವೇ ಇನ್ನಿತರ ಸಲಕರಣೆಗಳು. ಚೆಂಡಿನ ಸುತ್ತಳತೆ 43/4 ಛಿm. ಇದ್ದು ತೂಕ 29ರಿಂದ 41 mg.ಗಳಷ್ಟಿರಬೇಕು.
1880-1929ರ ನಡುವೆ ರ್ಯಾಕೆಟ್ಟುಗಳ (ಬ್ಯಾಟುಗಳು) ಅಳತೆಗಳನ್ನು ಕುರಿತಂತೆ ಯಾವ ನಿರ್ಬಂಧವೂ ಇರಲಿಲ್ಲ. ಆದರೆ ಇತ್ತೀಚೆಗೆ ಪ್ಲೈವುಡ್ಡಿನಿಂದ ಮಾಡಿದ ಬ್ಯಾಟುಗಳನ್ನು ಬಳಸುವುದಿದೆ. ಚೆಂಡಿನ ನಿಯಂತ್ರಣಕ್ಕಾಗಿ ಅದರ ಎರಡೂ ಕಡೆಗಳಿಗೂ ರಬ್ಬರನ್ನು ಅಂಟಿಸಿರುತ್ತಾರೆ.

ಟೇಬಲ್ ಟೆನಿಸ್ ಬ್ಯಾಟನ್ನು ಹಿಡಿಯುವುದರಲ್ಲಿ ಎರಡು ಕ್ರಮ ಉಂಟು. ಟೆನಿಸ್ ರ್ಯಾಕೆಟ್ಟನ್ನು ಹಿಡಿಯುವಂತೆಯೇ ಹಿಡಿಯುವುದು ಒಂದು ವಿಧವಾದರೆ, ಲೇಖನಿ ಹಿಡಿದುಕೊಳ್ಳುವ ಹಾಗೆ ಹಿಡಿಯುವುದು ಮತ್ತೊಂದು ವಿಧ. ಒಬ್ಬೊಬ್ಬರೂ ಯಾವುದಾದರೊಂದು ಕ್ರಮವನ್ನು ಅನುಸರಿಸುತ್ತಾರೆ.

ಟೇಬಲ್ ಟೆನಿಸ್ ಆಟದ ರೀತಿ, ಟೆನಿಸ್ ಆಟದ ರೀತಿಯನ್ನೇ ಹೋಲುತ್ತದಾದರೂ ಕೆಲವೊಂದು ಸಣ್ಣಪುಟ್ಟ ಮಾರ್ಪಾಡುಗಳು ಆಗಿವೆ. ಸರ್ವಿಸ್ ಮಾಡುವಾತ ಬ್ಯಾಟಿನಿಂದ ಚೆಂಡನ್ನು ಮೊದಲು ತನ್ನ ಕಡೆಯ ಟೇಬಲಿಗೆ ಹೊಡೆಯುತ್ತಾನೆ. ಚೆಂಡು ಅನಂತರ ಬಲೆಯನ್ನು ದಾಟಿ ಎದುರಾಳಿಯ ಕಡೆಯ ಟೇಬಲ್ಲಿನ ಮೇಲೆ ಬೀಳಬೇಕು. ಎದುರಾಳಿ ತನ್ನ ಬ್ಯಾಟನಿಂದ ಅದನ್ನು ನೇರವಾಗಿ ಮೊದಲನೆಯವನ ಭಾಗದ ಟೇಬಲ್ಲಿಗೆ ಹೊಡೆಯಬೇಕು. ಹೀಗೆ ಹಿಂತಿರುಗಿಸಲು ಯಾರಾದರೂ ಒಬ್ಬರು ವಿಫಲರಾದಾಗ ಪಾಯಿಂಟನ್ನು ಎಣಿಸಲಾಗುತ್ತದೆ. ಒಬ್ಬೊಬ್ಬರು ಸರದಿಯಂತೆ ಐದೈದು ಸರ್ವಿಸುಗಳನ್ನು ಮಾಡುತ್ತಾರೆ. ಗೆಲ್ಲ ಬೇಕಾದವನು 21 ಪಾಯಿಂಟನ್ನು ಪಡೆಯಬೇಕು. ಇಬ್ಬರದೂ 20 ಆದರೆ ಯಾರಾದರೊಬ್ಬರು ಮತ್ತೊಬ್ಬನಿಗಿಂತ ಎರಡು ಪಾಯಿಂಟ್ ಹೆಚ್ಚಿಗೆ ಪಡೆಯುವವರೆಗೆ ಆಟ ಮುಂದುವರಿಯುತ್ತದೆ ; ಮತ್ತು ಪ್ರತಿ ಪಾಯಿಂಟಿಗೂ ಸರ್ವಿಸ್ ಬದಲಾಯಿಸಲಾಗುತ್ತದೆ. ಇದು ಸಿಂಗಲ್ಸ್ ಆಟ ನಡೆಯುವ ರೀತಿ.

ಡಬಲ್ಸ್‍ನಲ್ಲಿ ಜೊತೆಗಾರರು ಚೆಂಡನ್ನು ಸರದಿಯಂತೆ ಹೊಡೆಯುತ್ತಾರೆ. ಇದು ನಿಯಮದ ಪ್ರಕಾರ ಸರ್ವಿಸ್ ಮಾಡಲು ಮತ್ತು ಸ್ವೀಕರಿಸಲು ಸಹಕರಿಸುತ್ತದೆ.

ಪ್ರತಿ ಮೂರು ವರ್ಷಕ್ಕೆ ಒಂದು ಸಲ ಅಂತರರಾಷ್ಟ್ರೀಯ ಫೆಡರೇಷನ್ನಿನ ಸದಸ್ಯರಾಷ್ಟ್ರಗಳಲ್ಲಿ ಯಾವುದಾದರೂ ಒಂದು ರಾಷ್ಟ್ರ ಮುಂದೆ ಬಂದು ಪ್ರಪಂಚದ ಟೇಬಲ್ ಟೆನಿಸ್ ಚಾಂಪಿಯನ್‍ಷಿಪ್ ಪಂದ್ಯವನ್ನು ನಡೆಸುತ್ತದೆ. ಇಲ್ಲಿ ಆಡಲಾಗುವ ಟೇಬಲ್ಲುಗಳ ಸಂಖ್ಯೆ 16-24. ಇಂಥ ಆಟಗಳನ್ನು ವೀಕ್ಷಿಸುವುದೇ ಒಂದು ಮೋಜು. ಎಣಿಕೆ ಹಾಗೂ ನಿಯಮಗಳನ್ನು ಪ್ರಮುಖ ರಾಷ್ಟ್ರಭಾಷೆಗಳಲ್ಲೂ ಘೋಷಿಸುತ್ತಾರೆ. ಪುರುಷರು ಮತ್ತು ಮಹಿಳೆಯರಿಗಾಗಿಯೇ ಬೇರೆಬೇರೆಯಾಗಿ ನಾನಾ ತರಹ ಟೇಬಲ್ ಟೆನಿಸ್ ಪಂದ್ಯಗಳು ನಡೆಯುತ್ತವೆ.

ಮೊದಲ ಹದಿನಾಲ್ಕು ಪ್ರಪಂಚ ಟೇಬಲ್ ಟೆನಿಸ್ ಚಾಂಪಿಯನ್‍ಷಿಪ್ ಪಂದ್ಯಗಳಲ್ಲಿ ಒಂದರಲ್ಲೂ ಸೋಲದೆ ಹಂಗರಿಯ ಜಿ. ವಿ. ಬಾರ್ನಾ ಎಂಬುವರು ಯಶಸ್ಸು ಗಳಿಸಿದರು. ಚೆಲಾಕ್ ಎಂಬುವರು ಈ ವರ್ಷಗಳ ಪಂದ್ಯಗಳಲ್ಲಿ ಫೈನಲ್ ತಲಪಿದರೂ ಒಂದುಬಾರಿಯೂ ಜಯಿಸದೆ ಬಾರ್ನಾರವರೊಂದಿಗಾಡಿ ಪರಾಭಾವ ಗೊಂಡರು. ಹಂಗರಿ ಅತ್ಯುತ್ತಮ ಟೇಬಲ್ ಟೆನಿಸ್ ಆಟಗಾರರ ತವರೂರಾಗಿದೆ. ಚೆಲ್ಲಾಕ್, ವಾನಾ, ಆಚಿಡ್ರಿಯೊಡಿಸ್, ಐ. ಕೆಲನ್-ಇವರು ಹಂಗರಿಯ ಇನ್ನಿತರ ಪ್ರಮುಖ ಆಟಗಾರರು.
ಭಾರತದಲ್ಲಿ : 1938ರಲ್ಲಿ ಎಂ. ಅಯೂಬ್ ಮತ್ತು ಪಿ. ಎಸ್. ಯು. ಐಯ್ಯರ್ ಎಂಬ ಇಬ್ಬರು ವಿದೇಶದಿಂದ ಹಿಂತಿರುಗಿದ್ದ ಟೇಬಲ್ ಟೆನಿಸ್ ಆಟ ಹೆಚ್ಚು ಜನಪ್ರಿಯವಾಗುವಂತಾಗಲು ಇಂಡಿಯನ್ ಟೇಬಲ್ ಟೆನಿಸ್ ಫೆಡರೇಷನ್ ಎಂಬ ಸಂಸ್ಥೆ ರಚಿಸಿದರು. ಈ ಫೆಡರೇಷನ್ ಪರವಾಗಿ ಹಂಗರಿಯ ಜಿ. ವಿ. ಬಾರ್ನಾ ಮತ್ತು ಚೆಲಾಕ್‍ರವರನ್ನು ಭಾರತದಾದ್ಯಂತ ಪ್ರವಾಸ ಮಾಡಲೂ ಮುಖ್ಯ ನಗರಗಳಲ್ಲಿ ಪ್ರದರ್ಶನ ಪಂದ್ಯಗಳನ್ನು ಆಡಲೂ ಆಹ್ವಾನಿಸಿತು. ಇವರ ಪಂದ್ಯ ಮೈಸೂರು ಮತ್ತು ಬೆಂಗಳೂರು ನಗರಗಳಲ್ಲೂ ನಡೆಯಿತು. ಇವರು ನಡೆಸಿಕೊಟ್ಟ ಆಟಗಳಿಂದಾಗಿ ಅನೇಕ ಉಪರಾಜ್ಯ ಟೇಬಲ್ ಟೆನಿಸ್ ಸಂಘಗಳ ಸ್ಥಾಪನೆಗೆ ಅವಕಾಶವಾಯಿತು. ಇವುಗಳನ್ನು ಇಂಡಿಯನ್ ಟೇಬಲ್ ಟೆನಿಸ್ ಫೆಡರೇಷನ್ನಿನ ಸದಸ್ಯರನ್ನಾಗಿ ಮಾಡಲಾಯಿತು. ಇಂಡಿಯನ್ ಟೇಬಲ್ ಟೆನಿಸ್ ಫೆಡರೇಷನ್ನಿನ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‍ಷಿಪ್ಸ್ ಪಂದ್ಯಗಳನ್ನು ಪ್ರತಿವರ್ಷವೂ ನಡೆಸತೊಡಗಿತು. ಈ ಪಂದ್ಯಗಳನ್ನು ಪ್ರಮುಖ ನಗರಗಳಲ್ಲಿ ಸಂಬಂಧಪಟ್ಟ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆಗಳ ಸಹಾಯದಿಂದ ನಡೆಸಲಾಗುತ್ತಿತ್ತು. ಎಂ. ಅಯೂಬ್, ಇಜತ್ ಆವಾನ್, ವಿ. ಶಿವರಾಮನ್, ಉತ್ತಮ ಚಂದ್ರನ್ ಮೊದಲಾದವರು ಪ್ರಮುಖ ರಾಷ್ಟ್ರೀಯ ಚಾಂಪಿಯನ್‍ಗಳ ಪೈಕಿ ಹೆಸರಾಂತವರು. ರಾಷ್ಟ್ರದ ಪ್ರಮುಖ ಟೇಬಲ್ ಟೆನಿಸ್ ಆಟಗಾರರೂ ಹಾಗೂ ಕರ್ನಾಟಕ ರಾಜ್ಯ ಚಾಂಪಿಯನ್ನರೂ ಆಗಿದ್ದ ಸಿ. ರಾಮಸ್ವಾಮಿ ಮತ್ತು ಎಂ. ವಿ. ಎಸ್. ವಿಠ್ಠಲ್‍ರವರು ತಮ್ಮ ಆಟದಿಂದಾಗಿ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದರು. ಬಿ. ಸಾಯಿಕುಮಾರ್, ಜಿ. ಜಗನ್ನಾಥ್, ಜಯಂತ್, ಕೈಟಿ ಜಾರ್ಜ್‍ಮನ್, ನಾಯೆಡೇ ಮೌಲ, ಮೀರ್ ಖಾಸಿಮ್ ಆಲಿ, ಫರೂಖ್ ಖೋಡೈಜೀ, ಕೆ. ಪಟೇಲ್ ಎಸ್. ಕುಲಕರ್ಣಿ, ಉಷಾ ಸುಂದರರಾಜ್, ಕಬಾಡ್ ಜಯಂತ್, ನೀರಜ್ ಬಜಾಜ್, ಮಂಜಿತ್ ದೂವಾ, ಸುಧೀರ್ ಫಡ್‍ಕೇ, ಬಿ. ಕೆ. ಅರುಣಕುಮಾರ್, ಸಿ. ಆರ್. ರಮೇಶ ಬಾಬು, ಜಿ. ಟಿ. ಶ್ರೀಕಾಂತ್-ಮುಂತಾದವರು ರಾಷ್ಟ್ರೀಯಖ್ಯಾತಿ ಗಳಿಸಿದ್ದಾರೆ.
(ಸಿ.ಆರ್.ಎಸ್.ಡಬ್ಲ್ಯೂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ